ಬುಧವಾರ, ಏಪ್ರಿಲ್ 1, 2020

ಹೊಸ ವರುಷವಿದು..



ಬಾಲ್ಯದಲಿ, ಆಟಕ್ಕೆ ಸಾಕೊಂದು ಬಯಲು..
ವಯಸ್ಸಿನಲಿ, ಅಂಟಿಕೊಳ್ಳುವುದು ಮತ್ತಾವುದೋ ಅಮಲು..
ಮುಂದಿನ ದಿನಗಳಲಿ ಉದ್ಯೋಗ, ಮದುವೆ, ಮನೆ, ಮಕ್ಕಳು - ದಾರಿಗಳೆಲ್ಲ ಕವಲು ಕವಲು..
ಮುಪ್ಪಿನಲಿ ಮತ್ತೆ ಮಗುವಾಗುತ್ತಾ, ಆಧ್ಯಾತ್ಮದೆಡೆಗೆ ಒಲವು..

ಆಸೆ, ಹುರುಪು, ಸಿಟ್ಟು - ಸೆಡವು,
ಏಳು - ಬೀಳು, ನೋವು - ನಲಿವು..
ಬಾಳ ದೋಣಿಯಲಿ ಭಾವನೆಗಳು ಅಪಾರ..
ಏರಿ ಬರುವ ಪ್ರತಿಯೊಂದು ಮಜಲಿನಲೂ
ಮೆಲುಕು ಹಾಕಲು ನೆನಪುಗಳು ಸಾವಿರ..
ಇವುಗಳ ಕೂಡಿ-ಕಳೆಯುತ್ತಾ ಸಾಗುವುದೇ ಬದುಕಿನ ಸಾಕ್ಷಾತ್ಕಾರ..

ಉರುಳುವ ವರುಷಗಳೊಡನೆ,
ಹುಟ್ಟು ಹಾಕುತ್ತಾ ಸಾಗೋಣ -
ಸೇರಲು ಮುಂದಿನ ನಿಲ್ದಾಣ..

ಎಲ್ಲಾರಿಗೂ ಹೊಸ ವರ್ಷದ ಶುಭಾಶಗಳು..

                     
                                                 -/ ವಿಮಾನಿ 😊


ಮಂಗಳವಾರ, ಡಿಸೆಂಬರ್ 31, 2019

ಶುಕ್ರವಾರ, ಮಾರ್ಚ್ 27, 2020

ಕಲ್ಲು ಕುಸುಮಗಳು...



ಕ್ಷಣಿಕ ಸುಖಕಾಗಿ ತನ್ನ ತನವನೆ ಕೊಂದು,
ಬೇಲಿಯಿಲ್ಲದ ಬಯಕೆಗಳ ಹೊತ್ತು ಬಂದ -
ಮಾನವತೆಯ ಮರೆತ ಮನ್ಮಥರ ತನುವ, ತಣಿಸುವ ಮನಗಳಿವು,
ಮರುಗಿ ಮುದುಡಿಹವು...

ಮೋಹದ ಹಸಿವಿಗೆ ಮೃಷ್ಟಾನ್ನವಾಗಿ,
ದೇಹದ ದಾಹಕೆ ಪಂಚಾಮೃತವಾಗಿ,
ಕಾಮದ ಕಣ್ಣುಗಳಿಗೆ ಕಿಸೆಯ ಕಾಸಾಗಿ ಕಾಣುವ ಕುಸುಮಗಳಿವು,
ಕೊರಗಿ ಕಲ್ಲಾಗಿಹವು..

ತನ್ನವನಲ್ಲದವನ ತುಮುಲಕೆ ತನುವ ದಾನವನಿತ್ತು,
ಕಂಡರಿಯದವನ ಕ್ರೌರ್ಯಕೆ ಒಲ್ಲದ ಸಮ್ಮತಿಯನಿತ್ತು,
ನಗುತ ಹಾಸುವ ಸೆರಗಿನಲಿ ಅಳುವ ಅವಿತಿಟ್ಟು,
ಸಲ್ಲದ ವೃತ್ತಿಯಲಿ ದಿನಂಪ್ರತಿ ಸಾಯುವ ಹೂಗಳಿವು...

ಸಮಾಜದ ದೃಷ್ಟಿಯಲಿ ಸೂಳೆಯೆಂಬ ಪಟ್ಟವ ಹೊತ್ತು,
ಸ್ತೀಕುಲ ಸೃಷ್ಟಿಯಲಿ ಕಳಂಕಿಗಳೆಂಬ ಕಲಶವ ಹೊತ್ತು,
ಹಡೆವ ಆಸೆಯ ತೊರೆದ ಮೂಕ ಮಾತೆಯರಿವರು,
ಮುತ್ತೈದೆಯರಲ್ಲವೆ ಈ ನಿತ್ಯಸುಮಂಗಲಿಯರು...

                                                              /-ವಿಮಾನಿ