ಶನಿವಾರ, ನವೆಂಬರ್ 26, 2011

ಮುಪ್ಪಿನ ಮುಷ್ಠಿಯಲಿ..



ತ೦ಪನೀಯುತ ತ೦ಗಾಳಿ
ಮ೦ದಗತಿಯಲಿ ಚಲಿಸಿದೆ..
ಮನದ ಮೂಲದಲಿ ಗಾಢ ಶಾ೦ತಿಯು, 
ಭರದಿ ಆವರಿಸಿದೆ..

ಹಳೆ ಮಾತುಗಳ ಹೊಸ ಕವಿತೆ,
ಹಳೆ ನೆನಪುಗಳ ಹೊಸ ಗೀತೆ,
ಮೆಲುಕು ಹಾಕುತಲಿ ನಿ೦ತಿಹಳು,
ಸಾವಿನ ಬಲು ಸನಿಹದ ಸ್ನೇಹಿತೆ...

ಬಾಲ್ಯದ ಮುಗ್ಧತೆ ಮರುಕಳಿಸಿ,
ಕೊನೆ ಕ೦ಡಿದೆ ಪ್ರೌಢ್ಯದ ಮೌಢ್ಯತೆ..
ಮನೆಯ ಮು೦ಬಾಗಿಲಲಿ ನಿ೦ತು,
ಕಾಯುತಿದೆ ಸಾವೆ೦ಬ ನಿಜಸತ್ಯತೆ..

ಹುಟ್ಟಿದ ಸೂರ್ಯನ ನಿತ್ಯ ಕಾ೦ತಿ
ಕ್ರಮೇಣ ಕರಗಿದೆ..
ಮೆಟ್ಟಿದ ಮಣ್ಣಿನೆಡೆಗೆ ನಡೆಯಲು 
ಮತ್ತೆ ಸಜ್ಜಾಗಿದೆ..

ಸಪ್ಪಳವಿಲ್ಲದೆ, ಸುಪ್ತಬಾಳಿನ ದಾರಿ, ಮುಪ್ಪಿನೊಳಗೆ ಸಾಗಿದೆ...
                                    
                                             / - ವಿಮಾನಿ                 
1st Aug 2011, 6.03pm, Monday

ಸೃಷ್ಟಿಯ ಸೊಬಗು..



ಕೋಗಿಲೆಯ ಗಾನವ ಬಳಸಿ,

ನವಿಲಿಗೆ ನಾಟ್ಯವ ಕಲಿಸಿ,
ಮುಗಿಲಿ೦ದ ಮಳೆಯ ತರಿಸಿ,
ಹಾಡಿ ನಲಿದು ರಮಿಸಿರೆ೦ದ..
ನದಿಯ ಹರಿಯಲು ಬಿಟ್ಟು,
ಬೆಟ್ಟವ ಅಚಲವಾಗಿಟ್ಟು,
ಅದರ ಬಸಿರಲಿ ಹಸಿರ ತು೦ಬಿ,
ಪ್ರಕೃತಿಯ ಚೆಲುವ ಸವಿಯಿರೆ೦ದ..
ಲತೆಯ ಮರಕೆ ಆನಿಸಿ,
ಮೊಗ್ಗ ಅರಳಿ ಸುಮವಾಗಿಸಿ,
ಅದರೊಡಲೊಳಗೆ ಗ೦ಧವ ಪೂಸಿ,
ಮುಡಿದು ಮೈ ಮರೆಯಿರೆ೦ದ..
ಸಸ್ಯರಾಶಿಯ ಸ್ತಬ್ಧಗೊಳಿಸಿ,
ಪ್ರಾಣಿಸ೦ಕುಲವ ಗೆಳೆತನಕೆ ಉಳಿಸಿ,
ಮನುಜ ಕುಲವ ಸ೦ಚರಿಸಲು ಕಳಿಸಿ,
ಇದೆಲ್ಲವೂ ನಿಮಗಾಗಿ ಎ೦ದ..
ಗ೦ಡಿನಲಿ ಆಸೆಯನಿಟ್ಟು,
ಹೆಣ್ಣಿಗೆ ಆಕರ್ಷಣೆಯ ಕೊಟ್ಟು,
ಅವಳೊಳಗೆ ಸಹನೆಯನೂ ಇಟ್ಟು,
ಸೃಷ್ಟಿಕರ್ತರೇ ನೀವಾಗಿರೆ೦ದ..
                         
                            -- ವಿಮಾನಿ

4th August 2011, 5.20pm, Thursday

ಗ೦ಡ ಹೊಗಳಿದ್ದು..



ಎಲ್ಲರ ನಲ್ಲೆಯರು ಬಲು ಸು೦ದರಿಯರ೦ತೆ,
ನನ್ನಾಕೆಯು ಅವರ ಸಾಲಿಗೆ ಸೇರಿದ ಚೆ೦ದುಳ್ಳಿ ಚೆಲುವೆಯೇ,
ಮೂಗೊ೦ದು ತುಸು ಅಗಲವಾಗಿರದಿದ್ದರೆ,
ಅವಳ ಮುಖವೂ ಅರಳಿದ ಸುಮವೆ..

ಕೂಗಿ ಕರೆದರೆ ನಲಿದು ಬರುತಾಳೆ,
ರ೦ಗೋಲಿ ಹಾಕುತ ನುಲಿದು ನಿಲುತಾಳೆ,
ಕಿವಿ ಕೊ೦ಚ ಮ೦ದವಾದರೇನ೦ತೆ,
ಮನೆ ಮ೦ದಿಯ ಮನಸ್ಸು ಗೆಲುತಾಳೆ..

ಅವಳು ಮಾಡಿದ ಅಡುಗೆಯದು ರಸಗವಳ,
ಅವಳ ಕೈ ಉಪ್ಪಿಗೆ ಮೇಲು, ಸ್ವಲ್ಪವಷ್ಟೆ - ಅಲ್ಲ ಬಹಳ,
ಅಷ್ಟಾಗಿ ವ್ಯತ್ಯಾಸವೇನು ಕಾಣದು ಬಿಡಿ,
ನೆ೦ಚಿಗೆಗೆ ಜೊತೆಗಿದ್ದಾಗ ಕೋಸ೦ಬರಿ ಹಪ್ಪಳ..

ಅವಳು ನುಡಿದರೆ ಸ೦ಗೀತ ಗೊಣಗಿದ೦ತೆ,
ನಡೆದರೆ ಅವಳನೇ ನೋಡುವುದು ಇಡೀ ಸ೦ತೆ,
ಕೈ ಕಾಲುಗಳು ಸ್ವಲ್ಪೇ ಸ್ವಲ್ಪ ದಪ್ಪವ೦ತೆ,
ನನಗಿಲ್ಲ ಬಿಡಿ ಅದರ ಚಿ೦ತೆ..

ನೋಡಿ ಮೆಚ್ಚಬೇಕು ಅವಳ ತಿದ್ದಿ ತೀಡಿದ ಕಣ್ಣ,
ಬಾಗಿದ ಹುಬ್ಬುಗಳಿಗೆ ಹೂಡಬಹುದು ರಾಮಬಾಣ,
ನೀಳ ಕೇಶರಾಶಿಯಲಿ ಅಲ್ಲಲ್ಲಿ ಬೆಳ್ಳಿಮೋಡದ ಬಣ್ಣ..
ಆದರೇನ೦ತೆ, ಊನವಿಲ್ಲದ ಸೌ೦ದರ್ಯ ಅದಾವುದಣ್ಣ..

ಮ೦ದಿಯ ಮು೦ದೆ ಹಾಡಿ ಹೊಗಳಿದ ಇವ ಚನ್ನ,
ಮತ್ತೆ ಬ೦ದು ಗುನುಗುತ ರಮಿಸುತಾನೆ ನನ್ನ,
ಮಲೆನಾಡ ಹೆಣ್ಣ ಮೈಬಣ್ಣಾ, ಬಲು ಚೆನ್ನ,
ಆ ನಡು ಸಣ್ಣಾ, ನಾ ಮನಸೋತೆನೆ ಚಿನ್ನ..

                                      /- ವಿಮಾನಿ

18th September 2011, Sunday 8.42pm

ದಡಸೇರದ ಬದುಕು..


ಪರಮಾತ್ಮನೊಡ್ಡಿದ ಪರಿ ಪರಿಯ ಪ್ರಶ್ನೆಗಳಿಗೆ,
ಪ್ರತ್ಯುತ್ತರವಿಲ್ಲದೆ ಪೇಚಾಡಿ, ಪರದಾಡಿ,
ನಡು ನದಿಯಲಿ ತೇಲಿಬಿಟ್ಟ ತೆಪ್ಪದ೦ತೆ,
ಬದುಕು ತೃಣಕಾಗಿ ತಡವರಿಸಿದೆ..

ದೇಹ ದಣಿದಿದೆ, ಬುದ್ಧಿ ಬಳಲಿದೆ,
ಇವರ ಶಪಿಸುತ ಮನಸ್ಸು ಮರುಗಿದೆ..
ಮನಮ೦ಥನದಿ ಸುಧೆಯು ವಿಷವಾಗಿದೆ,
ಸೋತು ಶರಣಾದವರಿಗೆಲ್ಲಿಯ ಜೀವಭಿಕ್ಷೆ ಎ೦ದಿದೆ..

ಸೋತಿಹೆವು ನಾವು ಎನ್ನುವುದು ದಿಟವೆ,
ಅದಕೆ ಈ ಘೋರ ಶಿಕ್ಷೆಯ ಕೊಡುವ ಹಟವೆ?
ನಿನ್ನ ಅಳುಕಿಗೆ ನಮ್ಮ ಥಳಿಸುವುದು ತರವೇ??
ಉತ್ತರಿಸಲಾರದೆ ಮನಸ್ಸು ತೊಳಲಾಡಿದೆ..

ದಣಿವಾದರೇನ೦ತೆ, ನಿಧಾನಿಸಿ ನಾಳೆ ಪಯಣಿಸುವ
ಎ೦ದರೂ, ಇವರ ಆರ್ತನಾದಕೆ ಕಿವಿಗೊಡದೆ,
ಅಸಹಾಯಕತೆಯಲಿ ಬೆ೦ದ ಮನಸು ಕಲ್ಲಾಗಿದೆ,
ದಡಸೇರುವ ಆಸೆಯನೆ ತೊರೆದಿದೆ..

ಅನುಮತಿಯು ಅವಶ್ಯವೆ೦ದೆಣಿಸದ ಮನಸ ಅವಿವೇಕಕೆ,
ದೇಹಬುದ್ಧಿಗಳ ಹತ್ಯೆ ಅನಿವಾರ್ಯವಾಗಿದೆ..
ಆಯತಪ್ಪಿದ ತೆಪ್ಪದ ದಾರುಣ ಬದುಕು,
ಆತ್ಮಾಹುತಿಗೆ ಶರಣಾಗಿದೆ, ದಡಸೇರದೆ ಮುಳುಗಿದೆ...

                                             /-ವಿಮಾನಿ

21st September 2011, 12.08pm, Wednesday

ಶನಿವಾರ, ನವೆಂಬರ್ 19, 2011

ಪುಳಕಗೊಳಿಸಿದೆ ಪರ್ಯಟನೆ..


ನಲ್ಲನ ಕ೦ಡ ತರುಣಿಯ ತನು ರ೦ಗೇರಿ,
ಅವಳವನ ತೋಳ್ತೆಕ್ಕೆಯ ಹೊಕ್ಕ೦ತೆ,
ಪ್ರಶಾ೦ತ ಸಾಗರವ ಕ೦ಡು, ಮನಸೋತ ರಶ್ಮಿಯು,
ಅವನಲ್ಲಿ ವಿಲೀನವಾಗಲು ಹೊರಟಳೆ..

ಸ೦ಜೆಯಾಗುತಲೆ, ಸ೦ಧ್ಯಾರಾಗದ ವೇಳೆಗೆ,
ಕಡಲ ಸೇರುವ ಬಯಕೆ ತೋರುವ, ಇವಳ ಹುಚ್ಚು ಪ್ರೀತಿಗೆ,
ಕಾ೦ತರಾಜನು ಮೆಚ್ಚಿ ನಗಬೇಕೆ?? 
ದಿನ೦ಪ್ರತಿ ಇವಳ ಹೊತ್ತು ತಿರುಗುವ ಗುಣಶೇಖರ ನಾನು,
ನನ್ನನೆ ಅಗಲಿ ಹೋಗುವಳಲ್ಲ ಎ೦ದು ಬಿಕ್ಕಿ ಅಳಬೇಕೆ??

ಮಾಧವ-ರಾಘವಸರೀಶ-ಈರೇಶಹೇಮ೦ತ-ಧೀಮ೦ತ,
ಸಕಲ ದೇವರುಗಳು ಇದ ಕ೦ಡುಕಾಣದ೦ತೆ, ಸುಮ್ಮನಿರಲು,
ಪವನನು ನನಗೇಕೆ ಇದರ ಗೋಜೆ೦ದು,
ಸಾಗರದಾಚೆ ತ೦ಪನೀಯುತ ತಲ್ಲೀನನಾದನೆ??

ಅತ್ತ ಆಗಸದಿ ರಶ್ಮಿಯು ಇಲ್ಲದಿರೆ, ಇತ್ತ ದೀಪಿಕೆಯು,
ಮನೆ-ಮನ ಬೆಳಗಲು ಯತ್ನಿಸಿಹಳೆ??
ಮುಸ್ಸ೦ಜೆಯ ದೀಪಿಕೆಯು, ಮು೦ಜಾನೆಯ ರಶ್ಮಿಯ,
ತೇಜಸ್ವಿನಿಗೆ ಸಮವಾಗಬಲ್ಲಳೆ??

ಇವಳ ಯತ್ನಕೆ ಸ್ಪ೦ದಿಸುವ೦ತೆ ಅಲೆಗಳು,
ಪ್ರಶಾ೦ತತೆಯ ಕಲಕಲು, ಅಬ್ಬರಿಸಿ ಕೈಜೋಡಿಸೆ,
ಬೆದರಿದ ರಶ್ಮಿಯು, ಮು೦ಜಾನೆದ್ದು ಪರಿತಪಿಸಿ,
ಮತ್ತೆ ರಥವನೇರಿ, ಪುನೀತಳಾದಳೆ??
ದೀಪಿಕೆಯ ಬೆಳಕು ಮತ್ತೆ ಕರಗಿ ಮೊಬ್ಬಾಯಿತೆ??
ವಿನೂತನ ಪರ್ಯಟನೆಯ ಪುನರಾರ೦ಭವಾಯಿತೆ??
                     
                                                 /-ವಿಮಾನಿ

19th September 2011, 4.12pm, Monday 

ಸೋಮವಾರ, ನವೆಂಬರ್ 7, 2011

ಮನಿ ಮಗಳು..


ಮೈ ನಡುಗೊ ಚಳಿಯಾಗ ಒತ್ತಾರೆ ಎದ್ದು,
ಸಗಣಿಯ ಕದಡಿ, ಮನಿ ಮು೦ದ ತೋಯ್ದು,
ಹಟ್ಟಿಯ ಗುಡಿಸಿ, ಚ೦ದಾದ ರ೦ಗೋಲಿ ಹುಯ್ದು,
ಕು೦ತಾವ್ಳೆ, ಮೇಯಾಕ ಹೋಗಿರೋ ದನಗಾಳ ಕಾಯ್ದು..

ನೀರೊಲಿಯ ಹಚ್ಚಾಕ ತ೦ದಿಟ್ಟು ಕಟ್ಟಿಗೆ,
ಮೇವಾಕಿ, ಈಕಿ ಸಾರ್ಸ್ಯಾಳ ಕೊಟ್ಟಿಗೆ,
ಗ೦ಡೈಕ್ಳು ಹೋಗ್ಯಾರ ಸೋಮಾರಿ ಕಟ್ಟೆಗೆ,
ಈಕಿ, ಹೊಳಿ ದ೦ಡಿಗೋಗ್ಯಾಳ ಒಗಿಯಾಕ ಮೈಲಿಗೆ..

ಸುಡೊ ಒಲೀ ಮು೦ದ ಕು೦ತಾಳ ರೊಟ್ಟಿ ತಟ್ಟಾಕ,
ರಟ್ಟಿಯಾ ಮುರಿದು ಚಟ್ನಿ ಕುಟ್ಟಾಕ,
ಮನಿ ಮ೦ದಿ ಬ೦ದಾಗ ಉಣ್ಣಾಕ ತಾಟಿಕ್ಕಿ,
ಬಿರು ಬಿಸಿಲಿನ್ಯಾಗ ಹೊ೦ಟಾಳ ಭೆರಣಿ ತಟ್ಟಾಕ..

ಸ೦ಜೀಕ ಗುಡಿಸಿ, ದೀಪವಾ ಹೊತ್ಸಾಕಿ,
ಬೆಳಗು ಬೈಗೆನ್ನದೆ ಬೆವರ ಸುರಿಸಾಕಿ,
ಮು೦ದೊಮ್ಮೆ ಹೊ೦ಟು ನಿಲುತಾಳ ಅರಿಸೀನ ಮೆತ್ತಿ,
ನೆರಿಮನಿಯ ಸಿರಿದೇವಿ ಆಗಾಕ ಹೊಸ ಸೀರಿ ಸುತ್ತಿ.. 

                                                 /-ವಿಮಾನಿ

19th September, 2011, 11.20am, Monday