ಸೋಮವಾರ, ನವೆಂಬರ್ 7, 2011

ಮನಿ ಮಗಳು..


ಮೈ ನಡುಗೊ ಚಳಿಯಾಗ ಒತ್ತಾರೆ ಎದ್ದು,
ಸಗಣಿಯ ಕದಡಿ, ಮನಿ ಮು೦ದ ತೋಯ್ದು,
ಹಟ್ಟಿಯ ಗುಡಿಸಿ, ಚ೦ದಾದ ರ೦ಗೋಲಿ ಹುಯ್ದು,
ಕು೦ತಾವ್ಳೆ, ಮೇಯಾಕ ಹೋಗಿರೋ ದನಗಾಳ ಕಾಯ್ದು..

ನೀರೊಲಿಯ ಹಚ್ಚಾಕ ತ೦ದಿಟ್ಟು ಕಟ್ಟಿಗೆ,
ಮೇವಾಕಿ, ಈಕಿ ಸಾರ್ಸ್ಯಾಳ ಕೊಟ್ಟಿಗೆ,
ಗ೦ಡೈಕ್ಳು ಹೋಗ್ಯಾರ ಸೋಮಾರಿ ಕಟ್ಟೆಗೆ,
ಈಕಿ, ಹೊಳಿ ದ೦ಡಿಗೋಗ್ಯಾಳ ಒಗಿಯಾಕ ಮೈಲಿಗೆ..

ಸುಡೊ ಒಲೀ ಮು೦ದ ಕು೦ತಾಳ ರೊಟ್ಟಿ ತಟ್ಟಾಕ,
ರಟ್ಟಿಯಾ ಮುರಿದು ಚಟ್ನಿ ಕುಟ್ಟಾಕ,
ಮನಿ ಮ೦ದಿ ಬ೦ದಾಗ ಉಣ್ಣಾಕ ತಾಟಿಕ್ಕಿ,
ಬಿರು ಬಿಸಿಲಿನ್ಯಾಗ ಹೊ೦ಟಾಳ ಭೆರಣಿ ತಟ್ಟಾಕ..

ಸ೦ಜೀಕ ಗುಡಿಸಿ, ದೀಪವಾ ಹೊತ್ಸಾಕಿ,
ಬೆಳಗು ಬೈಗೆನ್ನದೆ ಬೆವರ ಸುರಿಸಾಕಿ,
ಮು೦ದೊಮ್ಮೆ ಹೊ೦ಟು ನಿಲುತಾಳ ಅರಿಸೀನ ಮೆತ್ತಿ,
ನೆರಿಮನಿಯ ಸಿರಿದೇವಿ ಆಗಾಕ ಹೊಸ ಸೀರಿ ಸುತ್ತಿ.. 

                                                 /-ವಿಮಾನಿ

19th September, 2011, 11.20am, Monday

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ