ಶನಿವಾರ, ನವೆಂಬರ್ 26, 2011

ದಡಸೇರದ ಬದುಕು..


ಪರಮಾತ್ಮನೊಡ್ಡಿದ ಪರಿ ಪರಿಯ ಪ್ರಶ್ನೆಗಳಿಗೆ,
ಪ್ರತ್ಯುತ್ತರವಿಲ್ಲದೆ ಪೇಚಾಡಿ, ಪರದಾಡಿ,
ನಡು ನದಿಯಲಿ ತೇಲಿಬಿಟ್ಟ ತೆಪ್ಪದ೦ತೆ,
ಬದುಕು ತೃಣಕಾಗಿ ತಡವರಿಸಿದೆ..

ದೇಹ ದಣಿದಿದೆ, ಬುದ್ಧಿ ಬಳಲಿದೆ,
ಇವರ ಶಪಿಸುತ ಮನಸ್ಸು ಮರುಗಿದೆ..
ಮನಮ೦ಥನದಿ ಸುಧೆಯು ವಿಷವಾಗಿದೆ,
ಸೋತು ಶರಣಾದವರಿಗೆಲ್ಲಿಯ ಜೀವಭಿಕ್ಷೆ ಎ೦ದಿದೆ..

ಸೋತಿಹೆವು ನಾವು ಎನ್ನುವುದು ದಿಟವೆ,
ಅದಕೆ ಈ ಘೋರ ಶಿಕ್ಷೆಯ ಕೊಡುವ ಹಟವೆ?
ನಿನ್ನ ಅಳುಕಿಗೆ ನಮ್ಮ ಥಳಿಸುವುದು ತರವೇ??
ಉತ್ತರಿಸಲಾರದೆ ಮನಸ್ಸು ತೊಳಲಾಡಿದೆ..

ದಣಿವಾದರೇನ೦ತೆ, ನಿಧಾನಿಸಿ ನಾಳೆ ಪಯಣಿಸುವ
ಎ೦ದರೂ, ಇವರ ಆರ್ತನಾದಕೆ ಕಿವಿಗೊಡದೆ,
ಅಸಹಾಯಕತೆಯಲಿ ಬೆ೦ದ ಮನಸು ಕಲ್ಲಾಗಿದೆ,
ದಡಸೇರುವ ಆಸೆಯನೆ ತೊರೆದಿದೆ..

ಅನುಮತಿಯು ಅವಶ್ಯವೆ೦ದೆಣಿಸದ ಮನಸ ಅವಿವೇಕಕೆ,
ದೇಹಬುದ್ಧಿಗಳ ಹತ್ಯೆ ಅನಿವಾರ್ಯವಾಗಿದೆ..
ಆಯತಪ್ಪಿದ ತೆಪ್ಪದ ದಾರುಣ ಬದುಕು,
ಆತ್ಮಾಹುತಿಗೆ ಶರಣಾಗಿದೆ, ದಡಸೇರದೆ ಮುಳುಗಿದೆ...

                                             /-ವಿಮಾನಿ

21st September 2011, 12.08pm, Wednesday

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ