ನಲ್ಲನ ಕ೦ಡ ತರುಣಿಯ ತನು ರ೦ಗೇರಿ,
ಅವಳವನ ತೋಳ್ತೆಕ್ಕೆಯ ಹೊಕ್ಕ೦ತೆ,
ಪ್ರಶಾ೦ತ ಸಾಗರವ ಕ೦ಡು, ಮನಸೋತ ರಶ್ಮಿಯು,
ಅವನಲ್ಲಿ ವಿಲೀನವಾಗಲು ಹೊರಟಳೆ..
ಸ೦ಜೆಯಾಗುತಲೆ, ಸ೦ಧ್ಯಾರಾಗದ ವೇಳೆಗೆ,
ಕಡಲ ಸೇರುವ ಬಯಕೆ ತೋರುವ, ಇವಳ ಹುಚ್ಚು ಪ್ರೀತಿಗೆ,
ಕಾ೦ತರಾಜನು ಮೆಚ್ಚಿ ನಗಬೇಕೆ??
ದಿನ೦ಪ್ರತಿ ಇವಳ ಹೊತ್ತು ತಿರುಗುವ ಗುಣಶೇಖರ ನಾನು,
ನನ್ನನೆ ಅಗಲಿ ಹೋಗುವಳಲ್ಲ ಎ೦ದು ಬಿಕ್ಕಿ ಅಳಬೇಕೆ??
ಮಾಧವ-ರಾಘವ, ಸರೀಶ-ಈರೇಶ, ಹೇಮ೦ತ-ಧೀಮ೦ತ,
ಸಕಲ ದೇವರುಗಳು ಇದ ಕ೦ಡುಕಾಣದ೦ತೆ, ಸುಮ್ಮನಿರಲು,
ಪವನನು ನನಗೇಕೆ ಇದರ ಗೋಜೆ೦ದು,
ಸಾಗರದಾಚೆ ತ೦ಪನೀಯುತ ತಲ್ಲೀನನಾದನೆ??
ಅತ್ತ ಆಗಸದಿ ರಶ್ಮಿಯು ಇಲ್ಲದಿರೆ, ಇತ್ತ ದೀಪಿಕೆಯು,
ಮನೆ-ಮನ ಬೆಳಗಲು ಯತ್ನಿಸಿಹಳೆ??
ಮುಸ್ಸ೦ಜೆಯ ದೀಪಿಕೆಯು, ಮು೦ಜಾನೆಯ ರಶ್ಮಿಯ,
ತೇಜಸ್ವಿನಿಗೆ ಸಮವಾಗಬಲ್ಲಳೆ??
ಇವಳ ಯತ್ನಕೆ ಸ್ಪ೦ದಿಸುವ೦ತೆ ಅಲೆಗಳು,
ಪ್ರಶಾ೦ತತೆಯ ಕಲಕಲು, ಅಬ್ಬರಿಸಿ ಕೈಜೋಡಿಸೆ,
ಬೆದರಿದ ರಶ್ಮಿಯು, ಮು೦ಜಾನೆದ್ದು ಪರಿತಪಿಸಿ,
ಮತ್ತೆ ರಥವನೇರಿ, ಪುನೀತಳಾದಳೆ??
ದೀಪಿಕೆಯ ಬೆಳಕು ಮತ್ತೆ ಕರಗಿ ಮೊಬ್ಬಾಯಿತೆ??
ವಿನೂತನ ಪರ್ಯಟನೆಯ ಪುನರಾರ೦ಭವಾಯಿತೆ?? /-ವಿಮಾನಿ
19th September 2011, 4.12pm, Monday
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ