ಶುಕ್ರವಾರ, ಮಾರ್ಚ್ 27, 2020

ಕಲ್ಲು ಕುಸುಮಗಳು...



ಕ್ಷಣಿಕ ಸುಖಕಾಗಿ ತನ್ನ ತನವನೆ ಕೊಂದು,
ಬೇಲಿಯಿಲ್ಲದ ಬಯಕೆಗಳ ಹೊತ್ತು ಬಂದ -
ಮಾನವತೆಯ ಮರೆತ ಮನ್ಮಥರ ತನುವ, ತಣಿಸುವ ಮನಗಳಿವು,
ಮರುಗಿ ಮುದುಡಿಹವು...

ಮೋಹದ ಹಸಿವಿಗೆ ಮೃಷ್ಟಾನ್ನವಾಗಿ,
ದೇಹದ ದಾಹಕೆ ಪಂಚಾಮೃತವಾಗಿ,
ಕಾಮದ ಕಣ್ಣುಗಳಿಗೆ ಕಿಸೆಯ ಕಾಸಾಗಿ ಕಾಣುವ ಕುಸುಮಗಳಿವು,
ಕೊರಗಿ ಕಲ್ಲಾಗಿಹವು..

ತನ್ನವನಲ್ಲದವನ ತುಮುಲಕೆ ತನುವ ದಾನವನಿತ್ತು,
ಕಂಡರಿಯದವನ ಕ್ರೌರ್ಯಕೆ ಒಲ್ಲದ ಸಮ್ಮತಿಯನಿತ್ತು,
ನಗುತ ಹಾಸುವ ಸೆರಗಿನಲಿ ಅಳುವ ಅವಿತಿಟ್ಟು,
ಸಲ್ಲದ ವೃತ್ತಿಯಲಿ ದಿನಂಪ್ರತಿ ಸಾಯುವ ಹೂಗಳಿವು...

ಸಮಾಜದ ದೃಷ್ಟಿಯಲಿ ಸೂಳೆಯೆಂಬ ಪಟ್ಟವ ಹೊತ್ತು,
ಸ್ತೀಕುಲ ಸೃಷ್ಟಿಯಲಿ ಕಳಂಕಿಗಳೆಂಬ ಕಲಶವ ಹೊತ್ತು,
ಹಡೆವ ಆಸೆಯ ತೊರೆದ ಮೂಕ ಮಾತೆಯರಿವರು,
ಮುತ್ತೈದೆಯರಲ್ಲವೆ ಈ ನಿತ್ಯಸುಮಂಗಲಿಯರು...

                                                              /-ವಿಮಾನಿ