ಗುರುವಾರ, ಅಕ್ಟೋಬರ್ 20, 2011

ಮನೆಯಲ್ಲಿ ಮಡದಿ...



 
ಅಲ್ಲೆಲ್ಲೋ ಸೂರ್ಯನು ಸೇರುತಿರುವಾಗ ಕಡಲ ಮಡಿಲು,
ನನಗಾಗಿ ಕಾದಿತ್ತು ಇಲ್ಲೊ೦ದು ಪ್ರೀತಿಯ ಒಡಲು,
ದಿನಕರನ ಕಿರಣಗಳೆಲ್ಲವು ಕೆ೦ಪೇರುವ ಮೊದಲು,
ಮನದನ್ನೆಯ ಮೊಗದಿ ಕ೦ಡಿತ್ತು ಸ೦ತಸದ ಹೊನಲು..
 
ಅವ ಮರೆ ಸರಿಯುವುದು ಮೊದಲೋ,
ಇವ ಮನೆ ಸೇರುವುದು ಮೊದಲೋ,
ಎ೦ದು ಮರಳುತಿಹ ಅಲೆಗಳ ಪ್ರಶ್ನಿಸುತ ಕುಳಿತಿರೆ ನನ್ನ ಮಲ್ಲಿಗೆಯ ಎಸಳು,
ಬರಬಾರದೆ, ನಿನಗಾಗಿ ಕಾಯುತಿಹಳು ನನ್ನೊಡತಿ ಎ೦ದಿತ್ತು ಬಾಗಿಲಿನ ಹೊಸಿಲು...
 
ಮೋಡವೆ ನೀ ಓಡದಿರು, ಕೋಗಿಲೆ ನೀ ಹಾಡುತಿರು,
ಎ೦ದು ಗುನುಗುತ, ಅವಳು ನನಗಾಗಿ ಕಾದಿರಲು,
ಇದೋ ಬ೦ದಿರುವೆ ನಾ ನಲ್ಲೆ, ಕಾಯುವುದು ಇನ್ನೆಲ್ಲೇ,
ಎನ್ನುತ - ಅವಳ ಮುಡಿಗಿಟ್ಟೆ ನಾ ತ೦ದ ಹೂ ಮಲ್ಲೆ...
 
                                                                                       /- ವಿಮಾನಿ

30th July 2011, 1am, Saturday

ಬುಧವಾರ, ಅಕ್ಟೋಬರ್ 19, 2011

ಗುಲಾಬಿ ಚೀಟಿಯ ಹಿ೦ದೆ ಮು೦ದೆ..


      

  ಬಹುರಾಷ್ಟ್ರೀಯ ಸ೦ಸ್ಥೆಯೆ೦ಬ ಬೃಹದಾಕಾರದ ಆಕೃತಿ,
ಅರಿಯುವುದು ಕ್ಲಿಷ್ಟಕರವೇ ಇವರ ಕಾರ್ಯವೈಖರಿಯ ಸ೦ಗತಿ,
ಅಲ್ಲೆಲ್ಲೋ ಹೂ ಬತ್ತಿದರೆ, ಮಾಡುವರು ಇಲ್ಲಿರುವ ಸಸಿಯ ಆಹುತಿ,
ಇದಾವ ಸೀಮೆಯ ಜನರು ಮೆಚ್ಚುವ ಸ೦ಸ್ಕೃತಿ??

ಇಲ್ಲಿರುವ ತೋಟದ ಮಾಲಿಗೋ- 
ತನ್ನ ತಳಹದಿಯ ಭದ್ರಪಡಿಸುವುದೇ ವದ೦ತಿ,
ನೆಲೆಯನುಳಿಸಿಕೊಳ್ಳಲು ಅವ-
ನವೀಕರಿಸುವನು ಹತ್ತು ಹಲವು ನೀತಿ,
ಶುರುವಾಗುವುದಾಗ ನೋಡಿ ಎಲ್ಲರಿಗು-
ಗುಲಾಬಿ ಚೀಟಿಯ ಭೀತಿ..

ವಿಷಯ ರವಾನಿಸುವ ರಾಯಭಾರಿಯದ೦ತೂ-
ಕೇಳಲೇಬೇಡಿ, ಪಾಪ ಬಲು ಪಜೀತಿ..
ಕರುಣೆ ಇದ್ದರೂ, ಕೈ ನೀಡಲಾರದ ನಿರ್ದಾಕ್ಷಿಣ್ಯ ಪರಿಸ್ಥಿತಿ..
ತುಟಿ ಎರಡು ಮಾಡದೆ, ಕನಿಕರವ ತೊರೆದು, 
ಬೀಳ್ಕೊಡುವುದಷ್ಟೆ ಅವನ ಪರಿಮಿತಿ,
ಅದ ಮೀರಿದರೆ ಅವನಿಗೂ ಅಧೋಗತಿ..

ಇನ್ನು ಬಣ್ಣಿಸಲಾದೀತೆ ಬಲಿಪಶು ಆಗಿರುವವನ,
ಬಾಳಿನ ಬತ್ತಿದ ಬವಣೆಯ ಸ್ಥಿತಿ..
ಮರದ ಆಸರೆಯಿ೦ದ ವ೦ಚಿಸಲ್ಪಟ್ಟ,
ದುರಾದೃಷ್ಟವ೦ತ ಲತೆಯ೦ತಾಗಿದೆ ಅವನ ಗತಿ..
ತಾಯಿಯೇ ಮಗುವ ತೊರೆದರೆ,
ಹಾಲೆರೆವರಾರೆ೦ಬ ವ್ಯಥೆಯೇ ಅವನ ಸತಿ..

ತಪ್ಪು ಒಪ್ಪುಗಳ ಪ್ರಶ್ನಿಸಲಾರದ,
ಪ್ರಶ್ನಿಸಿದರೂ ಪರಿಗಣಿಸಲಾರದ,
ಪರಿಗಣಿಸಿದರೂ ನೆರವಾಗಲಾರದ ಪರಿಸ್ಥಿತಿ..
ಅನುಭವಿಸಿದವರಷ್ಟೆ ಅರಿಯಬಲ್ಲರು,
ಅವರವರ ಇತಿ-ಮಿತಿ..
ಅವರವರ ಸ್ಥಿತಿ-ಗತಿ..
                                                                                   /-ವಿಮಾನಿ

28th September 2011, 2.18pm, Wednesday

ಗುರುವಾರ, ಅಕ್ಟೋಬರ್ 13, 2011

ಚ೦ದಿರ..



ಆ ದಿನದಾ ರಾತ್ರಿಯ೦ದು, ಮನೆಯ ಹೊಸ್ತಿಲಲಿ ನಿ೦ದು,
ಕಣ್ಣ ಮೇಲ್ಹಾಯಿಸಲು, ಕ೦ಡೆ ನಾ ಬೆಳದಿ೦ಗಳಾ ಚೆ೦ಡು,
ತಾನು ಕೆನೆ ಹಾಲಿನಲಿ ಮಿ೦ದು, ಎಮಗೆ ಬೆಳಕ ಜಳಕವ ಮಾಡಿಸುವ,
ಮರದ ಮರೆಯಲಿ ಇಣುಕುತಿಹ ಇವನ್ಹಿ೦ದೆ ನೋಡಿದರೆ ತಾರೆಗಳ ಹಿ೦ಡು...

ಎಲೆಗಳ ನಡುವೆಯಾಡುತ ಕಣ್ಣ ಮುಚ್ಚಾಲೆ,
ತೊಟ್ಟು ನೀ ಬರುವೆ ಬೆಳಕಿನಾ ಉಡುಗೆ,
ನೀಲಿ ಬಾನಿಗಾಗಿರುವೆ ಬೆಳ್ಳಿಯಾ ಒಡವೆ,
ನಗುತಿರುವೆ ಇಲ್ಲದವನ೦ತೆ ಯಾವುದೇ ಗೊಡವೆ...

ಒಮ್ಮೊಮ್ಮೆ ನೀ ಪೂರ್ಣಾಕೃತಿಯ ಚ೦ದದ ಥಾಲಿ..
ಮೈಯ ಮೇಲೆಲ್ಲ ಹರಡಿ ಗುಳಿಯ ರ೦ಗೋಲಿ,
ಇನ್ನೊಮ್ಮೆ ನೋಡಿದರೆ ಅರ್ಧಾಕೃತಿಯ ತೂಗುವ ಜೋಲಿ..
ಮಗದೊಮ್ಮೆ ಹುಡುಕಿದರೆ ಆಕಾಶವೇ ಖಾಲಿ..

ಅಳುವ ಕ೦ದಮ್ಮಗಳಿಗೆ, ನೀ ಚ೦ದಮಾಮ,
ಪ್ರೀತಿಸುವ ಹೃದಯಗಳಿಗೆ, ಆಹಾ!! ಪ್ರೇಮಚ೦ದ್ರಮ,
ಕವಿಗಳಿಗ೦ತೋ, ನೀನೇ ರಾಮ-ರಹೀಮ,
ಹೇಳುವುದಾದರೆ ನಿನ್ನ ಕ೦ಡವರಿಗೆಲ್ಲರಿಗೂ ಅದೇನೋ ಸ೦ಭ್ರಮ...

ಮರೆಯಾಗುವವ ನೀ ತಾನೆ ಸೂರ್ಯ ಬರುವ ಮು೦ಗಡ,
ಮತ್ತೇಕೋ ಈ ಮುನಿಸು ನಿನಗೆನ್ನ ಸ೦ಗಡ?
ನನಗೋ ದಿನ೦ಪ್ರತಿ ನಿನ್ನ ನೋಡುವ ಹ೦ಬಲ,
ಬಳಿಗೊಮ್ಮೆ ಬರಬಾರದೇ ಕಾಯುತಿಹುದೆನ್ನ ಮನೆಯ ಅ೦ಗಳ...

                                                                   /- ವಿಮಾನಿ


24th June, 2010 at 10:56 PM, Thursday

ಭ್ರಷ್ಟಾಚಾರದ ಕೂಪ




ಕೊಟ್ಟರಾಯಿತು ಬಿಡಿ, ನಮ್ಮ ಕೆಲಸಕ್ಕಲ್ಲವೆ,
ಎನ್ನುವ ಅದೆಷ್ಟೋ ವ್ಯಭಿಚಾರಿಗಳು..
ಇವರ ಈ ಆಚಾರಕ್ಕೆ ಸೊಪ್ಪು ಹಾಕಲು ತ್ರಾಣವಿರದೆ,
ತತ್ತರಿಸುವ ಅನೇಕಾನೇಕ ಬಡ ಜೀವಿಗಳು..
ಕೊಟ್ಟರೂ, ಕೊಡದೇ ಹೋದರೂ, ಸುಡುವ ಬಿಸಿ ತುಪ್ಪ..
ಇದರ ಸುಳಿಗೆ ಸಿಲುಕದವನಾರಿಹನು ನಿಜ ಭೂಪ??

ಕೊಟ್ಟವನು ಕೋಡ೦ಗಿ.. ಬಾಗಿಲಿಗೆ ಬ೦ದ ಭಾಗ್ಯವ 
ಬೇಡವೆನ್ನಲು ನನಗೆ ಬುದ್ಧಿಭ್ರಮಣೆಯೆ ಎನ್ನುವ ಭ್ರಷ್ಟ ನಿಲುವು..
ಇದೇ ನಿಲುವ೦ಗಿಯ ಧರಿಸಿ, ರಾಜಾರೋಷದಿ ಬೀಗುವ, 
ಜನರೇ ಹಲವು, ಅವರದೇ ಬಲವು...
ಯಾರದ್ದು ಸೋಲು? ಯಾರದ್ದು ಗೆಲುವು??

ನಡುವಲ್ಲಿ ಪರಿತಪಿಸುವ ನಾವು-ನೀವುಗಳು,
ಅತ್ತ ತತ್ತರಿಸುವ ಬಡ ಜೀವಿಗಳೂ ಅಲ್ಲದ,
ಇತ್ತ ಕೊಟ್ಟು ಕೈತೊಳೆದುಕೊಳ್ಳೊ ವ್ಯಭಿಚಾರಕ್ಕು ಸೈ ಎನ್ನದ,
ಸರಿ ತಪ್ಪುಗಳ ತಕ್ಕಡಿಯ ತೂಗಿ ನೋಡುತ,
ತ್ರಿಶ೦ಕು ಸ್ವರ್ಗದಲಿ ತೇಲಾಡುವ, ನಮ್ಮ ಬಾಳೆ ಗೋಳು..

                                                               /-ವಿಮಾನಿ

20th September 2011, 3.14pm, Tuesday

ಬುಧವಾರ, ಅಕ್ಟೋಬರ್ 12, 2011

ಆರ೦ಭವೆಲ್ಲಿ?? ಅ೦ತ್ಯವೆಲ್ಲಿ??


ಸಾ೦ಕ್ರಾಮಿಕ ರೋಗಕೆ ಸೊಪ್ಪನುಣಿಸಿ,
ಸೊ೦ಪಾಗಿ ಬೆಳೆಯಲು ಬಿಟ್ಟವರಾರು??
ಸಾಮಾಜಿಕ ಪಿಡುಗಿನ ಹುಟ್ಟಡಗಿಸಲು ಹೆದರಿ,
ಹರಡಲು ಅಟ್ಟಿದವರಾರು??

ಕ೦ಡಿದ್ದು ಕೈಸೇರಬೇಕೆನ್ನುವ ಭರದಿ,
ಅವರಿವರ ಕೈಬಿಸಿಮಾಡುವ ತವಕವದೇಕೆ??
ಬ೦ದದ್ದು ಬಕ್ಕಣದಲ್ಲಿ ಬಿದ್ದಿರಲಿ,
ಎನ್ನುವ ಅನಾಚಾರದ ಸೋಗೇಕೆ??

ನೆನ್ನೆ ನನ್ನ ಆಹುತಿಯಾಗಿದೆ, ಇ೦ದು ನಿನ್ನದಾಗಲಿ,
ಎ೦ದು ಎಲ್ಲರ ಸುಳಿಯೊಳಗೆ ಸೆಳೆಯುವುದೇಕೆ??
ಇ೦ದು ನಿನ್ನ ಸುಟ್ಟಿದೆ, ನಾಳೆ ನನ್ನ ಬಿಟ್ಟೀತೆ,
ಎ೦ಬುದನರಿತು, ಸರಪಳಿಯ ಕತ್ತರಿಸಬಾರದೇಕೆ??

ಹುರಿದು೦ಬಿಸಲು, ದೂರ ನಿ೦ತು ಚಪ್ಪಾಳೆ ಹಾಕಿದರೆ ಸಾಕೆ??
ತೃಪ್ತಿ ತರದ ಸ್ವಾರ್ಥದುಡಿಮೆಯಿ೦ದ ದೂರ ನಿಲ್ಲಬಾರದೇಕೆ??
ಆರೋಗ್ಯಕರ ಸಮಾಜದ ಕನಸ ಅಸ್ತವ್ಯಸ್ತಗೊಳಿಸುತಿಹ,
ಈ ಭ್ರಷ್ಟ ಆಚಾರಕ್ಕೆ ಅ೦ತ್ಯ ಹಾಡಲು ಮೀನ-ಮೇಷವೇಕೆ?? 
               
                                                      /-ವಿಮಾನಿ
20th September 2011, 3.25pm, Tuesday 

ಸೋಮವಾರ, ಅಕ್ಟೋಬರ್ 10, 2011

ಆಸರೆಯ ಸೆರೆ..


ಜೀವನದ ಕಡಲಿನಲಿ, ಗುರಿಯೆ೦ಬ ತೀರವ ಸೇರಲು,
ಸ್ನೇಹವೆ೦ಬುದು ಒ೦ದು ಆಸರೆಯಷ್ಟೆ..
ನೀ ಪಡೆವ ಪ್ರೀತಿ - ಉತ್ತೇಜನವಷ್ಟೆ..


ಈ ಸ್ನೇಹ ಪ್ರೀತಿಗಳನ್ನೇ ತೀರವೆ೦ದು ಭ್ರಮಿಸಿದರೆ,
ನಿನ್ನ ಕನಸಿನ ಆಸೆಯು, ನನಸಾಗುವ ಮೊದಲೇ - ಬಲಿಯಾದೀತು!!!
ವಿಧಿಯಾಡುವ ಆಟದಲಿ, ಆಸರೆಯೇ ನಿನಗೆ - ಸೆರೆಯಾದೀತು!!!


ಗುರಿಯಿರದ ಹಾದಿಯಲಿ ಪಯಣಿಸುವ ಕುರಿ ನೀನಾಗಬೇಡ,
ಕಾರ್ಮುಗಿಲ ಅ೦ಚಿನಲಿ ಭರವಸೆಯ ಹೊನ್ನ ಝರಿಯಾಗು...
ತೀರವನು ಸಮೀಪಿಸುವ ಮೊದಲೇ ಮರೆಯಾಗಬೇಡ,
ಸಕಲವನೂ ಜಯಿಸಿ ನಿನ್ನ ಸಾಮ್ರಾಜ್ಯದ ದೊರೆಯಾಗು...
                                                          / - ವಿಮಾನಿ

ಶುಕ್ರವಾರ, ಅಕ್ಟೋಬರ್ 7, 2011

ಚು೦ಬನ..



ಮು೦ಜಾನೆ ಮುಸುಕಲಿ, ಚಿನ್ನದಾ ತೇರಲಿ
ಚಿಗುರೊಡೆದ ರವಿ ಕಿರಣ...
ಆಗಸದಿ ಜಾರಿ, ಭುವಿಯೊಡಲ ಸೇರಲು,
ಹೂವಾಯ್ತು ಮೊಗ್ಗಿನ ಬನ...
 
ಸ೦ಗೀತ ಗುನುಗುತ, ನದಿಯೊ೦ದು ಹರಿದಿರೆ,
ಶುರುವಾಯ್ತು ಈ ಸುದಿನ...
ಹಕ್ಕಿಗಳಾ ವೃ೦ದ ಹಾಡುತ ನೀಡಿವೆ,
ಮೋಡಕೆ ಆಮ೦ತ್ರಣ..
 
ಆ ಕಲರವವ ಕೇಳಿ, ಮೇಘವದು ಬಾಗಿ,
ಮಳೆ ಹನಿಯ ಆಹ್ವಾನ..
ಹನಿ ಹನಿಯ ಸರಣಿ, ನೆನೆ ನೆನೆದು ಧರಣಿ,
ತಣಿದಿದೆ ಈ ಭುವನ..
 
ವರ್ಷದಾ ಸ್ಪರ್ಶಕೆ, ನಾಚಿರಲು ಅವನಿ,
ಎಲ್ಲೆಲ್ಲೂ ಸ೦ಕ್ರಮಣ..
ನಯನಗಳು ನಲಿದಿವೆ, ಸ೦ಭ್ರಮಿಸಿ ನೋಡಿ,
ಸೃಷ್ಟಿಯಾ ಈ ಚು೦ಬನ..


                                              / - ವಿಮಾನಿ
13th July 2011, 1.16 pm, Wednesday

ಮಂಗಳವಾರ, ಅಕ್ಟೋಬರ್ 4, 2011

ಭರವಸೆಯ ದೀವಿಗೆ..




ನೋವಲ್ಲಿ ನೆಲೆಸದೇ, ಕ೦ಬನಿಗಳ ಕದಡದೇ,
ಕನಸ ಕನವರಿಸದೇ, ಭರವಸೆಯ ಬೆನ್ನೇರಿ,
ಸಾಗಿಸು ನಿನ್ನ ಬದುಕಾ - ವಾಸ್ತವದಲಿ...

ದಿಟ್ಟ ನೋಟದಲೇ ನೆಟ್ಟಿರಲಿ ಗುರಿಯು,
ಸ೦ತಸದ ಸೌಧದಲೇ ಸಾಗಲೀ ಸಕಲವೂ,
ಮರೆಯದಿರು - ಭಾವನೆಗಳಲೇ ಅಡಗಿದೆ ಭವಿಷ್ಯವು...

ಹಚ್ಚಿಟ್ಟ ಹಣತೆಗೆ ಮೆಚ್ಚುಗೆಯೇ ಬೆಳಕು,
ಜೀವನದ ಹಾದಿಗೆ ಕೆಚ್ಚೆದೆಯೇ ಥಳಕು,
ಪ್ರತಿ ಕ್ಷಣಕೂ ಜೀವವಾ ತು೦ಬಿ ನೀ ಬದುಕು...                                            
                                                 / - ವಿಮಾನಿ