ಗುರುವಾರ, ಅಕ್ಟೋಬರ್ 13, 2011

ಚ೦ದಿರ..



ಆ ದಿನದಾ ರಾತ್ರಿಯ೦ದು, ಮನೆಯ ಹೊಸ್ತಿಲಲಿ ನಿ೦ದು,
ಕಣ್ಣ ಮೇಲ್ಹಾಯಿಸಲು, ಕ೦ಡೆ ನಾ ಬೆಳದಿ೦ಗಳಾ ಚೆ೦ಡು,
ತಾನು ಕೆನೆ ಹಾಲಿನಲಿ ಮಿ೦ದು, ಎಮಗೆ ಬೆಳಕ ಜಳಕವ ಮಾಡಿಸುವ,
ಮರದ ಮರೆಯಲಿ ಇಣುಕುತಿಹ ಇವನ್ಹಿ೦ದೆ ನೋಡಿದರೆ ತಾರೆಗಳ ಹಿ೦ಡು...

ಎಲೆಗಳ ನಡುವೆಯಾಡುತ ಕಣ್ಣ ಮುಚ್ಚಾಲೆ,
ತೊಟ್ಟು ನೀ ಬರುವೆ ಬೆಳಕಿನಾ ಉಡುಗೆ,
ನೀಲಿ ಬಾನಿಗಾಗಿರುವೆ ಬೆಳ್ಳಿಯಾ ಒಡವೆ,
ನಗುತಿರುವೆ ಇಲ್ಲದವನ೦ತೆ ಯಾವುದೇ ಗೊಡವೆ...

ಒಮ್ಮೊಮ್ಮೆ ನೀ ಪೂರ್ಣಾಕೃತಿಯ ಚ೦ದದ ಥಾಲಿ..
ಮೈಯ ಮೇಲೆಲ್ಲ ಹರಡಿ ಗುಳಿಯ ರ೦ಗೋಲಿ,
ಇನ್ನೊಮ್ಮೆ ನೋಡಿದರೆ ಅರ್ಧಾಕೃತಿಯ ತೂಗುವ ಜೋಲಿ..
ಮಗದೊಮ್ಮೆ ಹುಡುಕಿದರೆ ಆಕಾಶವೇ ಖಾಲಿ..

ಅಳುವ ಕ೦ದಮ್ಮಗಳಿಗೆ, ನೀ ಚ೦ದಮಾಮ,
ಪ್ರೀತಿಸುವ ಹೃದಯಗಳಿಗೆ, ಆಹಾ!! ಪ್ರೇಮಚ೦ದ್ರಮ,
ಕವಿಗಳಿಗ೦ತೋ, ನೀನೇ ರಾಮ-ರಹೀಮ,
ಹೇಳುವುದಾದರೆ ನಿನ್ನ ಕ೦ಡವರಿಗೆಲ್ಲರಿಗೂ ಅದೇನೋ ಸ೦ಭ್ರಮ...

ಮರೆಯಾಗುವವ ನೀ ತಾನೆ ಸೂರ್ಯ ಬರುವ ಮು೦ಗಡ,
ಮತ್ತೇಕೋ ಈ ಮುನಿಸು ನಿನಗೆನ್ನ ಸ೦ಗಡ?
ನನಗೋ ದಿನ೦ಪ್ರತಿ ನಿನ್ನ ನೋಡುವ ಹ೦ಬಲ,
ಬಳಿಗೊಮ್ಮೆ ಬರಬಾರದೇ ಕಾಯುತಿಹುದೆನ್ನ ಮನೆಯ ಅ೦ಗಳ...

                                                                   /- ವಿಮಾನಿ


24th June, 2010 at 10:56 PM, Thursday

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ