ಬುಧವಾರ, ಅಕ್ಟೋಬರ್ 19, 2011

ಗುಲಾಬಿ ಚೀಟಿಯ ಹಿ೦ದೆ ಮು೦ದೆ..


      

  ಬಹುರಾಷ್ಟ್ರೀಯ ಸ೦ಸ್ಥೆಯೆ೦ಬ ಬೃಹದಾಕಾರದ ಆಕೃತಿ,
ಅರಿಯುವುದು ಕ್ಲಿಷ್ಟಕರವೇ ಇವರ ಕಾರ್ಯವೈಖರಿಯ ಸ೦ಗತಿ,
ಅಲ್ಲೆಲ್ಲೋ ಹೂ ಬತ್ತಿದರೆ, ಮಾಡುವರು ಇಲ್ಲಿರುವ ಸಸಿಯ ಆಹುತಿ,
ಇದಾವ ಸೀಮೆಯ ಜನರು ಮೆಚ್ಚುವ ಸ೦ಸ್ಕೃತಿ??

ಇಲ್ಲಿರುವ ತೋಟದ ಮಾಲಿಗೋ- 
ತನ್ನ ತಳಹದಿಯ ಭದ್ರಪಡಿಸುವುದೇ ವದ೦ತಿ,
ನೆಲೆಯನುಳಿಸಿಕೊಳ್ಳಲು ಅವ-
ನವೀಕರಿಸುವನು ಹತ್ತು ಹಲವು ನೀತಿ,
ಶುರುವಾಗುವುದಾಗ ನೋಡಿ ಎಲ್ಲರಿಗು-
ಗುಲಾಬಿ ಚೀಟಿಯ ಭೀತಿ..

ವಿಷಯ ರವಾನಿಸುವ ರಾಯಭಾರಿಯದ೦ತೂ-
ಕೇಳಲೇಬೇಡಿ, ಪಾಪ ಬಲು ಪಜೀತಿ..
ಕರುಣೆ ಇದ್ದರೂ, ಕೈ ನೀಡಲಾರದ ನಿರ್ದಾಕ್ಷಿಣ್ಯ ಪರಿಸ್ಥಿತಿ..
ತುಟಿ ಎರಡು ಮಾಡದೆ, ಕನಿಕರವ ತೊರೆದು, 
ಬೀಳ್ಕೊಡುವುದಷ್ಟೆ ಅವನ ಪರಿಮಿತಿ,
ಅದ ಮೀರಿದರೆ ಅವನಿಗೂ ಅಧೋಗತಿ..

ಇನ್ನು ಬಣ್ಣಿಸಲಾದೀತೆ ಬಲಿಪಶು ಆಗಿರುವವನ,
ಬಾಳಿನ ಬತ್ತಿದ ಬವಣೆಯ ಸ್ಥಿತಿ..
ಮರದ ಆಸರೆಯಿ೦ದ ವ೦ಚಿಸಲ್ಪಟ್ಟ,
ದುರಾದೃಷ್ಟವ೦ತ ಲತೆಯ೦ತಾಗಿದೆ ಅವನ ಗತಿ..
ತಾಯಿಯೇ ಮಗುವ ತೊರೆದರೆ,
ಹಾಲೆರೆವರಾರೆ೦ಬ ವ್ಯಥೆಯೇ ಅವನ ಸತಿ..

ತಪ್ಪು ಒಪ್ಪುಗಳ ಪ್ರಶ್ನಿಸಲಾರದ,
ಪ್ರಶ್ನಿಸಿದರೂ ಪರಿಗಣಿಸಲಾರದ,
ಪರಿಗಣಿಸಿದರೂ ನೆರವಾಗಲಾರದ ಪರಿಸ್ಥಿತಿ..
ಅನುಭವಿಸಿದವರಷ್ಟೆ ಅರಿಯಬಲ್ಲರು,
ಅವರವರ ಇತಿ-ಮಿತಿ..
ಅವರವರ ಸ್ಥಿತಿ-ಗತಿ..
                                                                                   /-ವಿಮಾನಿ

28th September 2011, 2.18pm, Wednesday

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ