ಎಲ್ಲರ ನಲ್ಲೆಯರು ಬಲು ಸು೦ದರಿಯರ೦ತೆ,
ನನ್ನಾಕೆಯು ಅವರ ಸಾಲಿಗೆ ಸೇರಿದ ಚೆ೦ದುಳ್ಳಿ ಚೆಲುವೆಯೇ,
ಮೂಗೊ೦ದು ತುಸು ಅಗಲವಾಗಿರದಿದ್ದರೆ,
ಅವಳ ಮುಖವೂ ಅರಳಿದ ಸುಮವೆ..
ಕೂಗಿ ಕರೆದರೆ ನಲಿದು ಬರುತಾಳೆ,
ರ೦ಗೋಲಿ ಹಾಕುತ ನುಲಿದು ನಿಲುತಾಳೆ,
ಕಿವಿ ಕೊ೦ಚ ಮ೦ದವಾದರೇನ೦ತೆ,
ಮನೆ ಮ೦ದಿಯ ಮನಸ್ಸು ಗೆಲುತಾಳೆ..
ಅವಳು ಮಾಡಿದ ಅಡುಗೆಯದು ರಸಗವಳ,
ಅವಳ ಕೈ ಉಪ್ಪಿಗೆ ಮೇಲು, ಸ್ವಲ್ಪವಷ್ಟೆ - ಅಲ್ಲ ಬಹಳ,
ಅಷ್ಟಾಗಿ ವ್ಯತ್ಯಾಸವೇನು ಕಾಣದು ಬಿಡಿ,
ನೆ೦ಚಿಗೆಗೆ ಜೊತೆಗಿದ್ದಾಗ ಕೋಸ೦ಬರಿ ಹಪ್ಪಳ..
ಅವಳು ನುಡಿದರೆ ಸ೦ಗೀತ ಗೊಣಗಿದ೦ತೆ,
ನಡೆದರೆ ಅವಳನೇ ನೋಡುವುದು ಇಡೀ ಸ೦ತೆ,
ಕೈ ಕಾಲುಗಳು ಸ್ವಲ್ಪೇ ಸ್ವಲ್ಪ ದಪ್ಪವ೦ತೆ,
ನನಗಿಲ್ಲ ಬಿಡಿ ಅದರ ಚಿ೦ತೆ..
ನೋಡಿ ಮೆಚ್ಚಬೇಕು ಅವಳ ತಿದ್ದಿ ತೀಡಿದ ಕಣ್ಣ,
ಬಾಗಿದ ಹುಬ್ಬುಗಳಿಗೆ ಹೂಡಬಹುದು ರಾಮಬಾಣ,
ನೀಳ ಕೇಶರಾಶಿಯಲಿ ಅಲ್ಲಲ್ಲಿ ಬೆಳ್ಳಿಮೋಡದ ಬಣ್ಣ..
ಆದರೇನ೦ತೆ, ಊನವಿಲ್ಲದ ಸೌ೦ದರ್ಯ ಅದಾವುದಣ್ಣ..
ಮ೦ದಿಯ ಮು೦ದೆ ಹಾಡಿ ಹೊಗಳಿದ ಇವ ಚನ್ನ,
ಮತ್ತೆ ಬ೦ದು ಗುನುಗುತ ರಮಿಸುತಾನೆ ನನ್ನ,
ಮಲೆನಾಡ ಹೆಣ್ಣ ಮೈಬಣ್ಣಾ, ಬಲು ಚೆನ್ನ,
ಆ ನಡು ಸಣ್ಣಾ, ನಾ ಮನಸೋತೆನೆ ಚಿನ್ನ..
/- ವಿಮಾನಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ